ಬಿಳಗಿಯ ಅರಸರು - 
15ನೆಯ ಶತಮಾನದ ಕೊನೆಯಿಂದ 17ನೆಯ ಶತಮಾನದ ಕೊನೆಯ ತನಕ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕು ಹಾಗೂ ಸುತ್ತಣ ಪ್ರದೇಶಗಳನ್ನು ಆಳಿದ ಒಂದು ರಾಜಮನೆತನದವರು. ಬಿಳಗಿ ಇವರ ರಾಜಧಾನಿ. ಇವರು ಆರಂಭದಲ್ಲಿ ವಿಜಯನಗರ ಮಾಂಡಲಿಕರಾಗಿದ್ದು ನೆರೆಯ ಗೇರುಸೊಪ್ಪೆ ಮತ್ತು ಸೋದೆ ಅರಸರ ಜೊತೆ ಆಗಾಗ ಹೋರಾಡುತ್ತಿದ್ದರು. ವಿಜಯನಗರದ ಪತನಾನಂತರ ಕೆಳದಿಯ ಮಾಂಡಲಿಕರಾಗಿ ಮುಂದುವರಿದರು. ಸೋದೆ ಹಾಗೂ ಕೆಳದಿ ರಾಜಮನೆತನದ ಜೊತೆ ಇವರು ರಕ್ತಸಂಬಂಧ ಹೊಂದಿದ್ದ ಉಲ್ಲೇಖಗಳೂ ಇವೆ. 

	ಇವರು ಮೂಲತಃ ಐಸೂರಿನವರು (ಬಿಳಗಿ ಇರುವ ಹೊಸೂರು). ಈ ವಂಶದ ಮೊದಲ ದೊರೆ ಅಂಡಣ್ಣ (ಸುಮಾರು 1475). ಅವನ ಮಗ ಪಾರಿಷ್ವ ಮುಂದಿನವರು ದುಂಡಣ್ಣ, ಭೈರವ (ಪಾರಿಷ್ವನ ಸೋದರ) ಮತ್ತು ನರಸಿಂಹ 1 (ಸುಮಾರು 1530). ನರಸಿಂಹ ವಿಜಯನಗರದ ಕೃಷ್ಣದೇವರಾಯನ ಮಾಂಡಲಿಕ. ಈತ ಪ್ರಾಯಶಃ ಮೊದಲಿಗೆ ಬಿಳಿಗಿಯಿಂದ ಆಳಲು ಪ್ರಾರಂಭಿಸಿದ. ಇವನ ಮಕ್ಕಳು ಒಂದನೆಯ ಘಂಟೆ ಒಡೆಯ ಮತ್ತು ಮುಂಡಣ್ಣ ಜೊತೆಯಾಗಿ ಆಳುತ್ತ ರಾಜ್ಯ ವಿಸ್ತಾರ ಮಾಡಿದರು. ಘಂಟೆ ಒಡೆಯನ ಕಿರಿಯ ಮಗ ನರಸ (ನರಸಿಂಹ 2), ಈತನ ಮಗ ವೀರಪ್ಪ ಮತ್ತು ಈತನ ಮಗ ರಂಗರಾಜ ಅಥವಾ ನರಸಿಂಹ 3 (1570, 1573) ಮುಂದಿನ ಅರಸರು. ಇವನ ಮಗ ಘಂಟೆ ಒಡೆಯ 2 (1580,1591). ಇವನು ವಿಜಯನಗರದ ಇಮ್ಮಡಿ ವೆಂಕಟಪತಿ ರಾಯನ ಮಾಂಡಲಿಕನಾಗಿದ್ದ. ಸೋದೆಯ ಅರಸಪ್ಪನ ಪುತ್ರಿ ವೀರಾಂಬೆ ಈತನ ಪತ್ನಿ. ಅನಂತರ ಇವನ ದಾಯಾದಿ ಒಂದನೆಯ ಘಂಟೆ ಒಡೆಯನ ಹಿರಿಯ ಮಗ ತಿಮ್ಮಪ್ಪನ ಪ್ರಪೌತ್ರ ಹಾಗೂ ತಮ್ಮಪ್ಪನ ಪುತ್ರ ಮುಮ್ಮಡಿ ಘಂಟೆ ಒಡೆಯ ರಾಜನಾದಂತೆ ತೋರುತ್ತದೆ. ಅನಂತರದ ದೊರೆ 4ನೆಯ ಘಂಟೆ ಒಡೆಯ. ಈತನ ಸೋದರಿ ಘಂಟೆಮ್ಮ, ಇಕ್ಕೇರಿ ವಂಶದ ಭದ್ರಯ್ಯನನ್ನು ಮದುವೆಯಾಗಿದ್ದಳು. ಮುಮ್ಮಡಿ ಘಂಟೆ ಒಡೆಯನ ಮಗ ಮೌನ, ಘಂಟೆ ಒಡೆಯ 4 (1643, 1651), ಈತನ ದತ್ತು ಮಗ ಶಿವಪ್ಪ 2, ಈತನ ದತ್ತು ಮಗ ಸೋಮಶೇಖರ 1 (1678), ಅವನ ಮಗ ಇಮ್ಮಡಿ ಸೋಮಶೇಖರ, ಮುಂದೆ ಈತನ ಮಗ ವೀರಭದ್ರ (ಭದ್ರಪ್ಪ) ರಾಜ್ಯವಾಳಿದರು. ವೀರಭದ್ರ ತನ್ನ ಮಗ ಬಸವೇಂದ್ರನಿಗೆ ತಾನೇ ಸ್ವತಃ ಪಟ್ಟಕಟ್ಟಿದ. ಈತನ ಕಾಲದಲ್ಲಿ ತುರುಕರ ಧಾಳಿಯಾಯಿತೆಂದೂ ಬಸವೇಂದ್ರ ಅವರನ್ನು ಸೋಲಿಸಿದನೆಂದೂ ಬಿಳಗಿಯ ಅರಸುಗಳ ವಂಶಾವಳಿ ಎಂಬ ಒಂದು ಚಂಪೂಕಾವ್ಯ ತಿಳಿಸುತ್ತದೆ. ಸುಮಾರು 1700ರ ಹೊತ್ತಿಗೆ ಬಹುಶಃ ಮುಗಲರು ಈ ವಂಶದ ಆಡಳಿತವನ್ನು ಕೊನೆಗಾಣಿಸಿರಬೇಕು. 

	ಮೊದಲು ಜೈನರಾಗಿದ್ದ ಈ ವಂಶದವರು ಅನಂತರ ವೀರಶೈವ ಧರ್ಮ ಸ್ವೀಕರಿಸಿದಂತೆ ತೋರುತ್ತದೆ. ಈ ವಂಶದ ರಂಗರಾಜ ಬಿಳಗಿಯ ರತ್ನತ್ರಯ ಚೈತ್ಯಾಲಯ ಕಟ್ಟಿಸಿದ. ಸಿದ್ದಾಪುರದ ಸಿದ್ಧಿ ವಿನಾಯಕ ದೇವಾಲಯ (ರಚನೆ 1651) ಮುಮ್ಮಡಿ ಘಂಟೆ ಒಡೆಯನ ಪತ್ನಿ ಜಯಾಂಬೆಯ ಕಾಣಿಕೆ. ಇಮ್ಮಡಿ ಘಂಟೇಂದ್ರ ಶಬ್ದಾನುಶಾಸನಂ ಕೃತಿಯನ್ನು ರಚಿಸಿದ ಭಟ್ಟಾಕಳಂಕನನ್ನು ಆದರಿಸಿದ ಎಂದು ಒಂದು ಶಾಸನ ತಿಳಿಸುತ್ತದೆ. ಕಾವ್ಯಸಾರದ ಕರ್ತೃವಾದ ವಿದ್ಯಾನಂದ ಒಂದನೆಯ ನರಸಿಂಹನ ಆಸ್ಥಾನಕ್ಕೆ ಭೇಟಿ ನೀಡಿದ್ದ.													

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ